ವಾರಣಾಸಿ ಎಕ್ಸ್‌ಪ್ರೆಸ್‌ ಮತ್ತು ಕಾಫಿ … 02/05/2019

ಲೇಖನಿ ಹಿಡಿದು ವರುಷ ಕಳೆದಿರಬಹುದು, ಬೆಂಗಳೂರಿನ ಟ್ರಾಫಿಕ್ ನಲ್ಲಿ ಕಳೆದು ಹೋದ ಪದಗಳು ,ಮೈಸೂರಿನಿಂದ ಬೆಂಗಳೂರೆಡೆಗಿನ ಬೆಳಗಿನ ರೈಲಿನಲ್ಲಿ ಮತ್ತೆ ಸಿಕ್ಕ ಅನುಭವ. ಮೈಸೂರಿನಿಂದ
ಬೆಂಗಳೂರಿಗೆ ಪ್ರತಿಬಾರಿ ರೈಲಿನಲ್ಲೇ ಪ್ರಯಾಣಿಸುವುದರೂ ,ವಾರಣಾಸಿ ಎಕ್ಸ್ಪ್ರೆಸ್ ಇಂದೇ ಮೊದಲು. ಬೆಳಗ್ಗೆ 7:20 ಕ್ಕೆ ಹೊರಡುವ ಈ ರೈಲಿಗೆ ಟಿಕೆಟ್ ಮುಂಚಿತವಾಗಿಯೇ ಕಾಯ್ದಿರಿಸಿದ್ದೆನಾದ್ದರಿಂದ ನಾನು ಹತ್ತಬೇಕಾದ ಬೋಗಿ ಹುಡುಕುತ್ತಾ ಹೆಜ್ಜೆ ಹಾಕುತ್ತಿದ್ದೆ. ನಾ ಹುಡುಕುತ್ತಿದ್ದ C1 ಬೋಗಿಯ ನಾಮಫಲಕ ಎಲ್ಲಿಯೂ ಕಾಣಲಿಲ್ಲ.
ನನ್ನ ಹುಡುಕಾಟ ಗಮನಿಸಿದ ಕಾಫಿ ಮಾರುವ ಹುಡುಗನೊಬ್ಬ , ಮೇಡಮ್ ಯಾವ ಬೋಗಿ ಹುಡುಕುತಿದ್ದೀರ ಎಂದು ಕೇಳಿದ, ನಾನು C1 ಎಂದೆ. car chair ಅಲ್ವಾ ಮೇಡಮ್ ಬನ್ನಿ ಮುಂದೆ ಇದೆ , B3 ಅಂತ ಬೋರ್ಡ್ ಹಾಕಿದೆ ನೋಡಿ ಅದೇ ಎಂದ. ಹಾಗೆ ಒಂದು ಕಾಫಿ ತಗೋಳಿ ಮೇಡಂ ಅಂದ. ನಾನು ಕಾಫಿ ಕುಡಿಯೋಲಪ್ಪ. ಬೇರೆ ಏನಾದ್ರು ಇದೆಯಾ ಎಂದೆ. ಬೇರೆ ಏನು ಇಲ್ಲ ಮೇಡಂ ಎಂದು ಹೇಳಿ ಹೊರಟು ಹೋದ. ನಾನು ರೈಲು ಹತ್ತಿ ಅದು C1 ಎಂದು ಖಾತ್ರಿ ಪಡಿಸಿಕೊಂಡು ನನ್ನ ಸೀಟ್ ನಲ್ಲಿ ಕುಳಿತೆ. ಬೇರೆ ರೈಲುಗಳಿಗಿಂತ ಇದು ಬಹಳ ಸ್ವಚ್ಛವಾಗಿತ್ತು. ಯಾವುದಾದರು ಇಂಪಾದ ಹಾಡು ಕೇಳುವ ಮನಸ್ಸಾಯಿತು. ರೈಲು ಪ್ರಯಾಣದಲ್ಲಿ ಕಿವಿಗೆ earphone ಹಾಕಿ ಇಷ್ಟವಾದ ಹಾಡು ಕೇಳೋ ಮಜಾನೇ ಬೇರೆ ಅಂತ ಮನಸ್ಸಲ್ಲೇ ಅಂದುಕೊಂಡು ಬ್ಯಾಗಿನಲ್ಲಿದ್ದ earphone ಹೊರಗೆ ತೆಗೆದೆ. ಅಷ್ಟರಲ್ಲಿ ಮತ್ತದೇ ಕಾಫಿ ಮಾರುವ ಹುಡುಗ ಬಂದು ಮೇಡಂ ಒಂದು ಕಾಫಿ ಕುಡೀಬಾರ್ದಾ? ಅಂದ. ನಾನು ಕಾಫಿ ಕುಡಿಯಲ್ಲಪ್ಪ, ಆದರೆ ಈ ಹತ್ತು ರೂಪಾಯಿ ತಗೋ ಪರ್ವಾಗಿಲ್ಲ ಅಂದೆ.
ಎಲ್ಲ ಟೀ, ಕಾಫಿ ಮಾರುವ ಹುಡುಗರಂತೆ ಆತನು ಮೊದಲಿಗೆ ಬೇಡ ಅಂದು ಆಮೇಲೆ ತೆಗೆದುಕೊಳ್ಳಬಹುದು ಅಂದಕೊಂಡೆ ಆದರೆ ಆತ ನನಗೆ ಟಿಪ್ಸ್ ಬೇಡ ಮೇಡಂ ಎಂದು ಹೇಳಿ ನಾನು ಮಾತು ಮುಗಿಸುವ ಮುನ್ನವೇ ತಿರುಗಿ ಸಹ ನೋಡದೆ ಹೋಗಿಯೇ ಬಿಟ್ಟ. ಅರೇ ಈತನಿಗಾಗಿ ಆದರೂ ಒಂದು ದಿನ ಕಾಫಿ ಕುಡಿಯಬಹುದಿತ್ತು ಅನ್ನಿಸಿ ನಾ ನೋಡವಷ್ಟರಲ್ಲಿ ಮಾಯವಾಗಿಬಿಟ್ಟ

..

ಮಾಡುವ ಕೆಲಸ ಯಾವುದಾದರೇನು, ಹಣ ಎಷ್ಟು ಕಡಿಮೆಯದ್ದಾದರೇನು ಆತ ತೋರಿದ ಸ್ವಾಭಿಮಾನ ನಮ್ಮಲ್ಲಿ ಎಷ್ಟು ಜನಕ್ಕಿದೆ? ಎಷ್ಟು ಜನ ದಿನ ನಿತ್ಯ ಪಾಲಿಸುತ್ತೀವಿ? ಅಲ್ಲೊಮ್ಮೆ ಇಲ್ಲಮ್ಮೆ ಇಂತ ಅನುಭವಗಳು ನಮ್ಮ ಸಮಾಜದಲ್ಲಿ ಇನ್ನೂ ಬಾಕಿ ಉಳಿದಿರುವ ನೈತಿಕತೆಯನ್ನು ನೆನಪಿಸುತ್ತದೆ. ಎಲ್ಲರೂ ಹೀಗೆ ಇದ್ದಿದ್ದರೆ ಭಾರತ ಹೇಗಿರುತ್ತಿತ್ತಲ್ಲವೇ?

ಸದಾ ಒಂದಲ್ಲ ಒಂದು ವಿಷಯದ ಬಗ್ಗೆ ದೂರು ಹೇಳೋ complaint box ಗಳಾಗಿರೋ ನಮಗೆ ಇಂಥ ವಿಷಯ positive ಆಲೋಚನೆಗಳನ್ನ ತರಿಸಬಹುದೇನೋ ಅನ್ನಿಸಿ ಹಂಚ್ಕೊಳ್ಳೋ ಮನಸಾಯ್ತು . .

Advertisements

ಅಂತರಂಗದಂತರಾಳದಲ್ಲಿ. . . 

ಅಂತರಂಗದಂತರಾಳದಲ್ಲಿ ಅನಂತಾನಂತ ಭಾವ ತರಂಗ..

ನಿಂತೂ ನಿಲ್ಲದೆ  ನಿರಂತರ ಅಬ್ಬರಿಸುವ ನೋವಿನಲೆಗಳ ಆರ್ಭಟದಿಂದಾಚೆ. .

ಬಚ್ಚಿಟ್ಟ ಬರೆದಿಟ್ಟ ನೂರೆಂಟು ಕಥೆಗಳಿಂದಾಚೆ..

ಕನಸೊಡೆದು ಕಣ್ಣೀರುಣಿಸಿದ ಮಾಯೆಯಿಂದಾಚೆ . .
ಬಂಧ ಮುರಿದ ಸಂಬಧಗಳಿಂದಾಚೆ. .
ಪುನಃ ಪುನಃ ಕಾಡೋ ನೆನಪುಗಳಿಂದಾಚೆ . .

ನೆನೆ ನೆನೆದು ಬಿಕ್ಕುವ ನೆಪಗಳಿಂದಾಚೆ. .

ನಾನಾಡೊ ಮಾತುಗಳಲ್ಲಡಗಿರುವ

ನಿರ್ಜೀವ ಪದಗಳಿಂದಾಚೆ . . .
ಮತ್ತೊಮ್ಮೆ ಹುಟ್ಟಿ

ಬದುಕಾಗಬೇಕಿದೆ, ನಗುವಾಗಬೇಕಿದೆ ,

ನನಗಿಂದು  ನಾನಾಗಬೇಕಿದೆ

ನಾನು ನಾನಾಗಬೇಕಿದೆ. . .
ಭುವಿ

ಮರಳಿ ಗೂಡಿಗೆ. . .

ಚಿತ್ರ ಕೃಪೆ : ಅರುಣ್

ಗುಬ್ಬಚ್ಚೀ ಬಾರೋ ಇಲ್ಲಿ, ತಾರಸಿಯ ಮೇಲಿಂದ ಅಪ್ಪನ ದನಿ . . ಹಾಂ ಬಂದೇ ಎನ್ನತ್ತಾ ಮೆಟ್ಟಲು ಹತ್ತುತ್ತಿದದ್ದಂತೆ ಯೋಚನೆಗಳು ಹಳೆಯ ನೆನಪಿನ ಸುತ್ತ ಹರಿದಾಡತೊಡಗಿದವು.ಸುಮಾರು ಇಪ್ಪತ್ತೆರಡು ವರುಷಗಳ ಹಿಂದಿನ ಮಾತು. ಆಗ ನನಗಿನ್ನೂ ಮೂರು ವರ್ಷ. ದೂರದ ಶ್ರೀರಂಗಮ್ ನ ದೇವಸ್ಥಾನಕ್ಕೆಂದು ಮನೆಯವರೆಲ್ಲ ಹೋಗಿದ್ದೆವು. ದೇವರ ದರ್ಶನ ಮುಗಿಸಿ ಊರಿಗೆ ಹಿಂತಿರುಗಲೆಂದು ನಾವು ತಂಗಿದ್ದ ಹೋಟೆಲ್ ನಿಂದ ಲಗೇಜ್ ಗಳನೆಲ್ಲ ಅಪ್ಪ ಮತ್ತು ದೊಡ್ಡಪ್ಪ ಹೊರಗಡೆ ಇಡುತ್ತಿದ್ದರು. ಅಲ್ಲೇ ನಾನು ಮತ್ತು ನನ್ನ ಚಿಕ್ಕಮ್ಮನ ಮಗ ಗೌತಮ ಆಡುತ್ತಿದ್ದೆವು. ಅಮ್ಮ ಮತ್ತು ದೊಡ್ಡಮ್ಮ ಬಸ್ಟ್ಯಾಂಡಿನತ್ತ ಹೆಜ್ಜೆ ಇಟ್ಟಿದ್ದರು. ಎಲ್ಲರೂ ಅಲ್ಲಿಂದ ಹೊರಡುವುದನ್ನು ಕಂಡ ಗೌತಮ ಕೂಡ ಓಡಿ ಹೋಗಿ ಬಸ್ ಹತ್ತಿದ. ಅವನನ್ನು ಹುಡುಕಲು ಹೋದ ನಾನು ದಾರಿ ತಪ್ಪಿದೆ. ಅಷ್ಟು ಹೊತ್ತಿಗಾಗಲೇ ಬಸ್ ಕೂಡ ಹೊರಟಾಗಿತ್ತು. ಬಸ್ ನಲ್ಲಿ ಜನ ಜಾಸ್ತಿ ಇದ್ದದ್ದರಿಂದ ನಾನಿಲ್ಲದ್ದನ್ನು ಯಾರು ಗಮನಿಸಲಿಲ್ಲ. ಅಮ್ಮನ ಬಳಿ ಇದ್ದೇನೆಂದು ಅಪ್ಪ, ಅಪ್ಪನ ಬಳಿ ಇದ್ದೇನೆಂದು ಅಮ್ಮ ಸುಮ್ಮನಾಗಿದ್ದರು. ಎತ್ತ ಹೋಗಬೇಕಂದರಿಯದ ನಾನು ಅಲ್ಲೇ ಬಿಕ್ಕಳಿಸಿ ಅಳುತ್ತ ಮಣ್ಣಿನಲ್ಲಿ ಚಿತ್ರ ಬಿಡಿಸುತ್ತಾ ಕುಳಿತಿದ್ದೆ. ಗಿಜಿಗಡುತ್ತಿದ್ದ ರಸ್ತೆಯಲ್ಲಿ ನನ್ನ ಕಣ್ಣೀರು ಕಂಡದ್ದು ಮಾತ್ರ ಹತ್ತು ಹನ್ನೆರಡು ವರ್ಷದ ದಾರಿಹೋಕ ಹುಡುಗನೋರ್ವನಿಗೆ. ಏನಾಯಿತೆಂದು ಆತ ಅರ್ಥವಾಗದ ಭಾಷೆಯಲ್ಲಿ ಕೇಳಿದಾಗ ನಾನು ಹೇಳುವುದಾದರೂ ಏನನ್ನು . ಬಹುಶಃ

ಭಾವನೆಗಳ ಮಾತು ಅರ್ಥವಾಗಲು ಭಾಷೆಯ ಅಗತ್ಯವಿರಲಿಲ್ಲ.ಅಷ್ಟಕ್ಕೂ ಮಾನವೀಯತೆಗೆ ಬಾಷೆಯ ಹಂಗೆಲ್ಲಿಯದು.ಅಥವಾ ನನ್ನಪ್ಪ ಅಮ್ಮನ ಜೊತೆ ನನ್ನನ್ನು ಮೊದಲೇ ನೋಡಿರಲೂ ಬಹುದು ಗೊತ್ತಿಲ್ಲ. ಸ್ವಲ್ಪವೇ ದೂರದಲ್ಲಿರುವ ಮುಂದಿನ ಬಸ್ಟಾಪ್ನಲ್ಲಿ ಬಸ್ ಅರ್ಧ ಗಂಟೆ ನಿಲ್ಲುತ್ತದೆಂದು ತಿಳಿದಿದ್ದ ಆತ ನನ್ನನ್ನು ಕೈ ಹಿಡಿದು ಕರೆದುಕೊಂಡು ಹೋಗಿ ನನ್ನಮ್ಮನ ಬಳಿ ಬಿಟ್ಟ. ವಾಸ್ತವದ ಅರಿವಾದ ಅವಳ ಕಣ್ಣಾಲಿಗಳು ಒದ್ದೆಯಾದವು. ಬಿಗಿದಪ್ಪಿ ಹಣೆಗೆ ಮುತ್ತಿಕ್ಕಿದಳು. ಇದರಲ್ಲಿ ಅರ್ಧ ಕಥೆ ನನ್ನಪ್ಪ ನನಗೆ ಹೇಳಿದ್ದಾದರೂ, ಆ ಹೋಟೆಲ್ ನ ಹೊರಗೋಡೆಯ ಗುಲಾಬಿ ಬಣ್ಣ,ನಾ ಅಳುತ್ತಾ ಕುಳಿತಿದ್ದ ರಸ್ತೆ ಬದಿಯ ಮಣ್ಣು , ಮಸುಕು ಮಸುಕಾದ ದೇವಸ್ಥಾನದ ಚಿತ್ರಣ,ಎಲ್ಲೋ ಕಳೆದು ಹೋಗಿದ್ದ ನನ್ನನ್ನು ಮತ್ತೊಮ್ಮೆ ನನ್ನಮ್ಮನ ಮಡಿಲು ಸೇರಿಸಿದ ಆ ಹುಡುಗನ ಸಿಮೆಂಟು ಕಲರ್ ಅಂಗಿ, ಕೆದರಿದ ಕೂದಲಿನ ನೆನಪು ಇಂದಿಗೂ ಸ್ಮೃತಿಪಟಲದಲ್ಲಿ ಭದ್ರವಾಗಿದೆ. ಎಲ್ಲವೂ ಒಂದು ನಿಮಿಷ ಕಣ್ಣ ಮುಂದೆ ಬಂದು ಹೋದವು.ಪ್ರೀತಿಯಿಂದ ನನ್ನಪ್ಪ ನನ್ನನ್ನು ಗುಬ್ಬಚ್ಚಿ ಎಂದು ಕರೆದಾಗಲೆಲ್ಲ , ಈ ಗುಬ್ಬಚ್ಚಿ ಯನ್ನು ಮರಳಿ ಗೂಡು ಸೇರಸಿದವನ ನೆನಪಾಗುತ್ತದೆ…ಅಲ್ನೋಡು ಕಂದಾ ಇವತ್ತು ಆ ನಕ್ಷತ್ರ ಎಷ್ಟು ಹೊಳೀತಾ ಇದೆ ಎಂದು ಅಪ್ಪ ಎಂದಿನಂತೆ ಮಾತು ಶುರೂ ಮಾಡಿದರು. .ಒಂದು ವೇಳೆ ಆತ ಗಮನಿಸದೇ ಹೋಗಿದ್ದರೆ ಈಗ ಹೇಗಿರುತ್ತಿದ್ದೆ?. ಈ ಮುದ್ದು ಅಪ್ಪನ ಜೊತೆ ಕುಳಿತು ನಕ್ಷತ್ರ, ಚಂದ್ರನ ಕಥೆ ಕೇಳೋಕಾಗ್ತಿತ್ತಾ ? ಮನಸಿನಲ್ಲಿಯೇ ಆತನಿಗೆ ಧನ್ಯವಾದ ಹೇಳುತ್ತಾ, ಅಪ್ಪನ ಮಾತಿನೆಡೆಗೆ ಗಮನ ಹರಿಸಿದೆ. .

 

ಭುವಿ

 

Dear 2016. . .


Dear 2016, 

You are one of the best years that I have recorded in my dairies . You made me experience so much in an year.You made me weep, that helped me to fathom out the value of a smile. You left me alone, for that I got time to apprehend  myself.You  made me taste the bitter , for that I apperceive sweetness.You broke my trust, and then I learnt to overhaul. You made me stand in the dark, from then I started seeing life in a different light. You showed me that life can be tough, now I comprehend what it takes to be stronger. You let me struggle, today I know how it feels to win. .In the end its all making sense. I am able connect the dots. Thank u 2016. It was an awesome journey. Indeed an amazing roller coaster ride. Perfect blend of bad and the good, sorrows and the joy.Now it’s time to wave goodbye, time to ink my ending notes.

Thanks for being tough, thanks for being kind, thanks for making me fall, thanks for making me raise, thanks for teaching me to stand up for myself, thanks for giving me the courage to go ahead. Thanks for doing all that you could do to make me better. Thanks for being so wonderful. 🙂 🙂

Bhuvi 

ಉತ್ತರ ಸಿಗಬಹುದೇ?

ಲೋಗ್ ಕ್ಯಾ ಕಹೇಂಗೆ ಹ್ಯಾಸ್ ಕಿಲ್ಡ್ ಮೋರ್ ಡ್ರೀಮ್ಸ್ ದ್ಯಾನ್ ಎನಿತಿಂಗ್ ಎಲ್ಸ್ ಇನ್ ದಿಸ್ ವರ್ಲ್ಡ್ ಅಂತ ಯಾವ್ದೋ ಫೇಸ್ಬುಕ್ ಪೋಸ್ಟ್ ಓದಿದ ನೆನಪು. ಅಂದಿನಿಂದ ಇಂದಿನವರೆಗೂ ನನ್ನನ್ನು ನೂರಾರು ಪ್ರಶ್ನೆಗಳು ಕಾಡ್ತಾನೆ ಇದೆ. ನನಗಂತು ಅದ್ಯಾವುದಕ್ಕೂ ಉತ್ತರ ಸಿಕ್ಕಿಲ್ಲ. ನಿಮಗ್ಯಾರಿಗಾದರು ಗೊತ್ತಿದ್ರೆ ದಯವಿಟ್ಟು ತಿಳಿಸಿ. ಹುಚ್ಚು ಯೋಚನೆ ಅನ್ನಿಸಿದರೆ, ಹುಚ್ಚು ಹುಡಗಿ ಅಂತ ನಕ್ಕು ಕ್ಷಮಿಸಿಬಿಡಿ. 

ನಮ್ಮ ಬಗ್ಗೆ ಜನ ಏನಂದ್ಕೊಳ್ತಾರೆ ಅಂತ ನಾವ್ಯಾಕೆ ಅಷ್ಟು ಯೋಚನೆ ಮಾಡ್ತೀವಿ? Why are we so obsessed? ಹೀಗೆ ಮಾಡಿದ್ರೆ ಅವ್ರೇನಂತಾರೆ ,ಹಾಗೆ ಮಾಡಿದ್ರೆ ಇವ್ರೇನಂತಾರೆ . . ಜೀವನ ಪೂರ್ತಿ ಯಾರ್ ಯಾರಿಗೋಸ್ಕರನೋ ಯಾಕೆ ಬದುಕ್ತೀವಿ? ಹಾಗಂತ ಬೇಕಂದ ಹಾಗೆಲ್ಲ ರೀತಿ ನೀತಿ ಇಲ್ದೆ ಬದುಕಬೇಕು ಅಂತ ನಾನು ಹೇಳ್ತಿಲ್ಲ. ಆದರೆ ಬದುಕಿನ ನ್ಯಾಯವಾದ ಆಸೆಗಳಿಗೂ, ಕನಸುಗಳಿಗೂ ಅದು ಯಾಕೆ ತಡೆಯಾಗಬೇಕು?

ಅಮ್ಮನಿಗೆ ಮೂರು ವರ್ಷದ ಮಗು ತನಗಿಷ್ಟ ಬಂದ ಹಾಗೆ ಆಟ ಆಡಿದ್ರೆ , ಸದ್ದು ಮಾಡಿದ್ರೆ ಶಿಸ್ತು ಅನ್ನುವ ಹೆಸರಲ್ಲಿ ಸುಮ್ಮನಾಗಿಸುವ ಕಸರತ್ತು. ಶಿಸ್ತು ಮನೆಯಂದ ಶುರುವಾಗಬೇಕೇ ಹೊರತು ನಾಲ್ಕು ಮಂದಿಯ ಮುಂದೆ ನನ್ನ ಮಗ ತಂಬಾ silent ಅಂತ ಹೇಳಿಕೊಳ್ಳುವ ತೋರಿಕೆಯಲ್ಲ.  ಮಗುವನ್ನು ಕೂಡ ಸಹಜವಾಗಿರೋದಕ್ಕೆ ನಾವು ಬಿಡೋದಿಲ್ಲ. ಆ ಮಗು ಸ್ಕೂಲಿಗೆ ಹೋಗೋಕೆ ಶುರು ಮಾಡಿದ್ರೆ ಇನ್ನೊಂದು ಹೊಸ ನಾಟಕ ಶುರು.ನನ್ನ ಮಗ ಸ್ಕೂಲಿಗೆ ಫರ್ಸ್ಟ್ ಅಂತ ಜಂಭ ಕೊಚ್ಚಿಕೊಳ್ಳುವ ಗೀಳು. ಸಂಬಂಧಿಕರ ಮುಂದೆ ಕೀಳಾಗ್ತೀವಿ ಅನ್ನೋ ಭಯ. ಮುಂದೆ ಇಂಜಿನಿಯರಿಂಗ್ ,ಮೆಡಿಕಲ್ ಸೀಟ್ ತಗೊಳಿಲ್ಲಾ ಅಂದ್ರೆ , ಅಯ್ಯೋ ಪಾಪ ಪ್ರಪಂಚಾನೆ ಮುಳುಗಿ ಹೋಯ್ತು. ಇಂಜಿನಿಯರಿಂಗ್, ಮೆಡಿಕಲ್ ಮಾಡಿರೋರ ಪಾಡು ದೇವರಿಗೇ ಪ್ರೀತಿ. ಆದರೂ ನನ್ನ ಮಗ ಇಂಜಿನಿಯರ್ , ಮಗಳು ಡಾಕ್ಟರ್ ಅಂತ ಹೇಳಿಕೊಳ್ಳುವ ಹುಚ್ಚು. ಓದಿ ಮುಗಿಸಿ ಕೆಲಸ ಸಿಗದಿದ್ದರೆ ಪಕ್ಕದ ಮನೆಯವರು ಏನಂತಾರೆ? ಸಿಕ್ಕಿದ್ದು ಒಳ್ಳೆಯ ಕೆಲಸ ಅಲ್ಲದಿದ್ರೆ ಎದುರು ಮನೆಯವರು ಏನಂತಾರೆ? ಈ ಒಳ್ಳೆಯ ಕೆಲಸ ಅನ್ನೋದು ಯಾವುದೋ, ಯಾರ Definition ಓ ಗೊತ್ತಿಲ್ಲ.

ಇನ್ನು ಮದುವೆ ವಿಷಯಕ್ಕೆ ಬಂದರೆ , ಅಬಬ್ಬಾ . .  ಈಗಲೆ ಸುಸ್ತಾಗ್ತಿದೆ. ಹಳ್ಳಕ್ಕೆ ಬಿದ್ದವನಿಗೆ ಆಳಿಗೊಂದು ಕಲ್ಲು. ಗಾಳಿಮಾತುಗಳದ್ದೇ ರಾಜ್ಯಭಾರ. ಹುಡುಗನ ಮನೆಯವರು ಹೀಗಂದ್ರಂತೆ. ಹುಡುಗಿ ಕಡೆಯವರು ಹಾಗಂದ್ರಂತೆ. ಸೆಕೆಂಡುಗಳಲ್ಲಿ ಮೆಗಾ ಸೀರಿಯಲ್ ಸ್ಕ್ರಿಪ್ಟ್   ರೆಡಿ. ಮದುವೆ ಮಾಡುವವರು ಯಾರಿಗೇನು ಕಡಿಮೆ ಇಲ್ಲ. ಮಕ್ಕಳು ಹೊಸ ಜೀವನ ಶುರು ಮಾಡ್ಲಿ ಅಂತ ಮದುವೆ ಮಾಡ್ತಾರೋ ಅಥವಾ ವ್ಯಾಪಾರಕ್ಕೆ ಕೂತಿರ್ತಾರೋ ಆ ದೇವರಿಗೇ ಗೊತ್ತು. ನಾಜೂಕಾಗಿ ದರೋಡೆ  ಮಾಡೋದ್ರಲ್ಲಿ professional degree ಮಾಡ್ಕೊಂಡು ಬಂದಿರ್ತಾರೇನೋ ಅನ್ನಿಸಿ ಬಿಡುತ್ತೆ.  ವರದಕ್ಷಿಣೆ ಕೊಡುವವರಿಗೆ ಮರ್ಯಾದೆ ಪ್ರಶ್ನೆ. ತೆಗೆದುಕೊಳ್ಳುವವರಿಗೆ ಒಣ ಪ್ರತಿಷ್ಠೆ . ವರದಕ್ಷಿಣೆ ಸಾಮಾಜಿಕ ಪಿಡುಗು ಅಂತ ಮಾತನಾಡುವವರೇ ಸದ್ದಿಲ್ಲದೇ ಅದನ್ನು ಒಪ್ಪಿ ಬದುಕುತಿದ್ದಾರೆ.

ಯಾತಕ್ಕಾಗಿ ಯಾರಿಗಾಗಿ ಈ ಕೃತಕ ಬದುಕು. ನಕಲಿಯಾಗಿ ಬದುಕುವುದಕ್ಕೆ ನಾವು ಯಾಕೆ ಇಷ್ಟು ಒಗ್ಗಿ ಹೋಗಿದ್ದೇವೆ? ಸಹಜತೆ ನಮಗೆ ಅಷ್ಟೊಂದು ಬೇಡವಾಗಿ ಹೋಯ್ತಾ?

ನಮ್ಮ ಜೀವನದ ಪ್ರತಿ ಹೆಜ್ಜೆಯನ್ನೂ ಯಾಕೆ ಪ್ರಯೋಜನಕ್ಕೆ ಬಾರದ ಮಾತಿಗಳಿಗೆ ಗಂಟು ಹಾಕಿದ್ದೇವೆ? ಯಾರದ್ದೋ ಅನಿಸಿಕೆಗೆ ನಾವು ಜೋತುಬೀಳುವುದಾದರೂ ಯಾಕೆ?ವಿಚಿತ್ರ ಅನ್ನಿಸಲ್ವಾ? ಅಥವಾ ನನಗೆ ಮಾತ್ರ ಹಾಗನ್ನಿಸ್ತಿದ್ಯಾ? 

ಒಂದು ಕಡೆ ಬುದ್ಧಿಜೀವಿಗಳ ಹಾಗೆ ಇವನೆಲ್ಲಾ ತರ್ಕ ಮಾಡುವ  ಇದೇ ನಾವು ಮತ್ತೊಂದುಕಡೆ ಇನ್ಯಾರದ್ದೋ ಜೀವನದ ಬಗ್ಗೆ comment ಮಾಡ್ತಾ ಖುಷಿ ಪಡ್ತಿರ್ತೀವಿ. ಮತ್ಯಾರನ್ನೋ judge ಮಾಡಿ ಮಾತನಾಡಿ ಅವರ ಮನಸಿಗೆ ನೋವು ಮಾಡಿರ್ತೀವಿ. ನಮ್ಮ ಷ್ಟ ಕ್ಕೆ ನಾವು ಬದುಕುವ ಶಿಸ್ತನ್ನು ನಾವು ಕಲಿಯೋದಾದ್ರು ಯಾವಾಗ? Live and Let Live ಎನ್ನುವುದರ ಅರ್ಥ ಅಷ್ಟೊಂದು ಕಷ್ಟಾನ?

ಎಂದಾದರು ಒಮ್ಮೆ ಇದಕೆಲ್ಲಾ ಉತ್ತರ ಸಿಗುವ ನಿರೀಕ್ಷೆ ಯಲ್ಲಿ

ಭುವಿ

ವಿದಾಯ ಹೇಳುವೆನು. . . .

wp-1476726688800.jpeg

ವಿದಾಯ ಹೇಳುವೆನು
ಕಂಡ ಕನಸಿಗೂ
ನೊಂದ ಮನಸ್ಸಿಗೂ

ಕಳೆದುಹೋದ ಕಾಲಕ್ಕೂ
ಮಾಸದ ಗಾಯಕ್ಕೂ
ಭ್ರಮೆಯಲ್ಲೇ ಸವೆಸಿದ ಬದುಕಿಗೂ
ನಾನೆಂಬ ಹಳೆಯ ನೆನಪಿಗೂ
ವಿದಾಯ ಹೇಳುವೆನು ನಾನು

ಕಲ್ಪನೆಯ ಬಾನಲ್ಲಿ ತೇಲಾಡಿ
ನಿರಾಸೆಯ ಕಡಲಲ್ಲಿ ಈಜಾಡಿ
ದಿಕ್ಕು ದೆಸೆಯರಿಯದೆ ಅಡ್ಡಾಡಿ
ಹಾರಾಡಿ, ಹೋರಾಡಿ
ಹುಡುಕಾಡಿ ದಕ್ಕಿದ್ದು ಈ ಬದಲಾದ ನಾನು

ಬದುಕಿಗೆ ಮತ್ತಷ್ಟು ಪಳಗಿ
ಪರಿಪಕ್ವತೆಯೆಡೆಗೆ ಮುಖಮಾಡಿ ನಿಂತ ನಾನು

ವಿದಾಯವಿದು ಅಂತ್ಯವಲ್ಲ ಆರಂಭ
ವಿದಾಯವಿದು ಮುಕ್ತಾಯವಲ್ಲ ಮುನ್ನುಡಿ
ವಿದಾಯವಿದು ವಿನಾಶವಲ್ಲ ವಿಕಾಸ

ಒಲುಮೆಯ ಬದುಕೇ ನಾನೀಗ ಮತ್ತೊಮ್ಮೆ ಸಿದ್ಧ
ಹೇಳು ನನಗಾಗಿ ಮುಂದೇನ ಬಚ್ಚಿಟ್ಟಿರುವೆ ?
ಬದುಕಿದು ಕ್ಷಣಿಕ ,ಕಾಡುವ ಕುತೂಹಲವೇಕೋ ನಿರಂತರ

Bhuvi

ಭಗ್ನ ಸ್ವಪ್ನ

ಅಡುಗೆ ಮನೆಯ ಕಿಟುಕಿಯಲಿ
ಇಣುಕಿದವಳ ಅಣುಕಿಸುವ೦ತೆಯೇ
ಧೋ ಎ೦ದು ಬಿಡದೇ ಸುರಿಯುತ್ತಿತ್ತು ಮಳೆ
ಅವಳ ಕನಸು ಕರಗಿದಷ್ಟೇ ಬಿರುಸಾಗಿ
ತ೦ಪೆರವ ಮಳೆಯಲ್ಲೂ ಅವಳ ಮನಸ್ಸು
ಮಾತ್ರ ಕುದಿಯುತ್ತಿತ್ತು ಒಲೆಯ ಮೇಲೆ
ಬೇಯುತಿದ್ದ ಅಕ್ಕಿ ಕಾಳಿನಷ್ಟೇ ಜೋರಾಗಿ
ಬೆ೦ದು ಬೂಧಿಯಾದ ಭಗ್ನ ಸ್ವಪ್ನಗಳ ಕುರುಹಾಗಿ